16 ವರ್ಷಗಳ ಹಿಂದೆ ಕಟ್ಟಿದ್ದ ಈ ಶಾಲಾ ಕೊಠಡಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದಾಗ ಏಕಾಏಕಿ ಮೇಲ್ಚಾವಣಿ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗುತ್ತಿಗೆದಾರರ ಕಳಪೆ ಕಾಮಗಾರಿಯೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆಯಿಂದ ಭಯಭೀತರಾಗಿರುವ ಮಕ್ಕಳಿಗೆ ಶಾಲೆಯ ಹೊರಗೆ ಪಾಠ ಮಾಡಲಾಗುತ್ತಿದೆ.
ಬೆಳಿಗ್ಗೆ ತರಗತಿಗಳು ನಡೆಯುವ ವೇಳೆ ಏಕಾಏಕಿ ಶಾಲೆಯ ಚಾವಣಿಯ ಸಿಮೆಂಟ್ ಅರ್ಧ ಭಾಗ ಕಿತ್ತು ಬಂದಿದೆ. ಮಕ್ಕಳು ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಶಾಲೆಯಿಂದ ಹೊರಗೆ ಓಡಿದ್ದಾರೆ. ಗಾಬರಿಗೊಂಡ ಮಕ್ಕಳನ್ನು ಶಿಕ್ಷಕರು ಶಾಲಾ ಆವರಣದಲ್ಲಿ ಕೂರಿಸಿ ತರಗತಿಗಳನ್ನು ನಡೆಸಿದರು.
ಶಾಲೆಯ ಕಟ್ಟಡ ನಿರ್ಮಾಣವಾಗಿ 15 ಇಲ್ಲವೇ 16 ವರ್ಷಗಳು ಕಳೆದಿದೆ. ಕಟ್ಟಡ ಹಳೆಯದಲ್ಲದಿದ್ದರೂ ಚಾವಣಿ ಕುಸಿದಿದೆ. ಕೊಠಡಿ ನಿರ್ಮಾಣದಲ್ಲಿ ಗುತ್ತಿಗೆದಾರ ನಿರ್ಲಕ್ಷ್ಯ ತೋರಿದ್ದಾರೆ. ಗುಣಮಟ್ಟ ಕಾಪಾಡಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.
ಶಾಲೆಯಲ್ಲಿ ಇರುವ ಕೊಠಡಿಗಳು ಸಹ ಅಲ್ಲಲ್ಲಿ ಬಿರುಕು ಬಿಟ್ಟಿವೆ. ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಒಟ್ಟು 9 ತರಗತಿಗಳು ನಡೆಯುತ್ತವೆ. 137 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 137 ವಿದ್ಯಾರ್ಥಿಗಳಿಗೆ 5 ಜನ ಶಿಕ್ಷಕರಿದ್ದಾರೆ. ಒಟ್ಟು 6 ಶಾಲಾ ಕೊಠಡಿಗಳು ಇವೆ. ಅದರಲ್ಲಿ ಐದು ಕೋಣೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತದೆ.

0 Comments
Await For Moderation ; Normally we don't allow Comments